ನಿತೀಶ್​ ಸಂಪುಟ ಭ್ರಷ್ಟ ಮತ್ತು ಕ್ರಿಮಿನಲ್​ಗಳಿಂದ ತುಂಬಿದೆ: ಪ್ರಶಾಂತ್ ಕಿಶೋರ್ | Prashant Kishor

Prashant Kishor | ಪ್ರಶಾಂತ್ ಕಿಶೋರ್
Prashant Kishor | ಪ್ರಶಾಂತ್ ಕಿಶೋರ್
Published on
ಪಟನಾ: ನಿತೀಶ್ ಕುಮಾರ್ ಅವರ ನೂತನ ಸಚಿವ ಸಂಪುಟವು ಭ್ರಷ್ಟ ಮತ್ತು ಕ್ರಿಮಿನಲ್ ಹಿನ್ನಲೆ ಇರುವ ನಾಯಕರಿಂದಲೇ ತುಂಬಿ ತುಳುಕುತ್ತಿದೆ ಎಂದು ಜನ್​ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
ಪಶ್ಚಿಮ ಚಂಪಾರಣ್‌ದ ಗಾಂಧಿ ಆಶ್ರಮದಲ್ಲಿ ಕೈಗೊಂಡಿದ್ದ ಒಂದು ದಿನದ ಮೌನ ವೃತದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಿಶೋರ್, ಜನವರಿ 15 ರಂದು ತಮ್ಮ ಪಕ್ಷವು 'ಬಿಹಾರ ನವನಿರ್ಮಾಣ ಸಂಕಲ್ಪ ಯಾತ್ರೆ'ಯನ್ನು ಪ್ರಾರಂಭಿಸಲಿದ್ದು. ಈ ಯಾತ್ರೆಯ ಸಂದರ್ಭದಲ್ಲಿ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರ ಹೊಸ ಸಚಿವ ಸಂಪುಟವು ಭ್ರಷ್ಟರು ಮತ್ತು ಅಪರಾಧಿಗಳಿಂದ ತುಂಬಿದೆ. ಈ ಸಚಿವ ಸಂಪುಟವು, ದೊಡ್ಡ ಬಹುಮತ ನೀಡಿರುವ ಬಿಹಾರದ ಜನರ ಮುಖಕ್ಕೆ ಹೊಡೆದಂತೆ, ಅನೇಕ ಭ್ರಷ್ಟ ನಾಯಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದರಿಂದ ಇದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದರು.
ನೂತನ ಸಚಿವರ ಹಿನ್ನಲೆಯನ್ನೊಮ್ಮೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಿಎಂ ಕುಮಾರ್​ಗೆ ಬಿಹಾರದ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು. ಬಿಜೆಪಿ ನಾಯಕರು 1 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಮತಗಳನ್ನು ಖರೀದಿಸಿದ್ದಾರೆ. ಈಗ ಅವರಿಗೆ ರಾಜ್ಯ ಮತ್ತು ಇಲ್ಲಿನ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ, ನಾನು ಏನಾದರೂ ತಪ್ಪು ಹೇಳುತ್ತಿದ್ದರೆ, ಸರ್ಕಾರ ನನ್ನನ್ನು ಜೈಲಿಗೆ ಹಾಕಬಹುದು ಎಂದು ಸವಾಲ್​ ಹಾಕಿದರು.
ರಾಜ್ಯದ ತುರ್ತು ನಿಧಿ ಮತ್ತು ವಿಶ್ವಬ್ಯಾಂಕ್‌ನಿಂದ ಬಂದ ಹಣವನ್ನು ಸರ್ಕಾರ ಬೇರೆಡೆಗೆ ಬಳಸಿಕೊಂಡಿದೆ ಎಂದ ಕಿಶೋರ್​, ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಎನ್‌ಡಿಎ ಸರ್ಕಾರ ಮಹಿಳೆಯರಿಗೆ 2 ಲಕ್ಷ ರೂ. ನೀಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದು ಹೇಳಿದರು. ಈ ಸರ್ಕಾರದ ದುಷ್ಕೃತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಅಭಿಯಾನ ಪ್ರಾರಂಭವಾಗುವ ಮೊದಲು ಜನ ಸುರಾಜ್ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುವುದು, ಮುಂದಿನ ಐದು ವರ್ಷಗಳಲ್ಲಿ ತಮ್ಮ ಆದಾಯದ 90 ಪ್ರತಿಶತ ಹಣವನ್ನು ಪಕ್ಷದ ಪ್ರಚಾರಕ್ಕಾಗಿ ನೀಡುವುದಾಗಿ ತಿಳಿಸಿದ ಕಿಶೋರ್​, ತಮ್ಮ ಯಾತ್ರೆಯನ್ನು 15-18 ತಿಂಗಳುಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದರು. 
ನನ್ನ ದೆಹಲಿ ಮನೆಯನ್ನು ಹೊರತುಪಡಿಸಿ, ಕಳೆದ 20 ವರ್ಷಗಳಲ್ಲಿ ನಾನು ಸಂಪಾದಿಸಿರುವ ಯಾವುದೇ ಆಸ್ತಿಯನ್ನು ಪಕ್ಷಕ್ಕಾಗಿ ದಾನ ಮಾಡುತ್ತೇನೆ,  ಬಿಹಾರದ ಜನರು ಪಕ್ಷಕ್ಕೆ ವಾರ್ಷಿಕವಾಗಿ ಕೇವಲ 1,000 ರೂ.ಗಳನ್ನು ದೇಣಿಗೆ ನೀಡುವಂತೆ ನಾನು ವಿನಂತಿಸುತ್ತೇನೆ. ಪಕ್ಷಕ್ಕೆ ಇಷ್ಟು ಮೊತ್ತವನ್ನು ದೇಣಿಗೆ ನೀಡದ ಯಾರನ್ನೂ ನಾನು ಭೇಟಿಯಾಗುವುದಿಲ್ಲ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net